ಕವನ

ನಶೆಯ ಕಳೆದು
ಉಷೆಯು ಬರಲು
ಹೊಂಬೆಳಕಿನ ಅಭಿಷೇಕ
ಬಿರಿದ ಮೊಗ್ಗರಳಿ
ಹಕ್ಕಿ ಇಂಪಾಗಿ ಆಡಲು
ಎಂಥ ಚಂದವೀ ಪುಳಕ

ಎದೆ ಮೇಲಿನ ಮಂಜಿನ ಹನಿಯಲ್ಲಿ
ನೇಸರ ಬರೆದ ಕಿರಣ ಲೇಖನಿಯಲ್ಲಿ
ಮುಂಜಾನೆಯ ಸುಂದರ ಕವನ
ನಿಸರ್ಗದ ಆ ಪ್ರಶಾಂತತೆಯಲ್ಲಿ
ಸಮಚಿತ್ತದ ಅನುಭಾವದಲ್ಲಿ
ಆಹ್ಲಾದತೆಯ ನೆರಳು-ಬೆಳಕಿನ ಗೆಳೆತನ

ಹರಿಯುವ ನೀರಿನ ಜುಳುಜುಳು ನಾದ
ಮಧು ಹೀರುವ ದುಂಬಿ ನೀನಾದ
ಪ್ರಕೃತಿ ಉಲಿದ ಇನಿದನಿ ಸಂಗೀತ
ತಂಗಾಳಿ ತೀಡುವ ಉನ್ಮಾದ
ದಣಿದ ಮನಕೆ ನೀಡಿದೆ ಆನಂದ
ತಪ್ಪದೆಂದು ನಿಸರ್ಗದ ಈ ಸಿದ್ಧಾಂತ

ಮೂಡಣದರಮನೆ ಬಾಗಿಲು ತೆರೆದು
ಬಂದನು ನೇಸರ ಕಿರಣದಿ ಹೊಳೆದು
ದಿನ ಬೆಳಗುವ ಕಾಯಕ ಮಾಡಲು
ಹೊಡೆದೋಡಿಸಿ ಇನ್ನು ಸೋಮಾರಿತನ
ಮೈಮನದಿ ತುಂಬಲಿ ಹೊಸತನ
ಸವಿಯೋಣ ಸಂಭ್ರಮದ ಈ ಕ್ಷಣ

0541ಎಎಂ08052022
*ಅಮುಭಾವಜೀವಿ ಮುಸ್ಟೂರು* 

ಬೇಕಿಲ್ಲದೊಲವು
##########

ಬದುಕಿನ ಕಟು ಸತ್ಯಗಳ ಹುಟ್ಟು ಹಾಕಿ ದಡ ಸೇರಿಸಬೇಕೆಂಬ ಹುಮ್ಮಸ್ಸಿನಲ್ಲಿ ಹೊರಟ ಭಾವನೆಗಳ ಹೋರಾಟದಲ್ಲಿ ಅತ್ತ ಧರಿ  ಇತ್ತ  ಪುಲಿ ಎಂಬ ಹೊಯ್ದಾಟದಲ್ಲಿ ಇದ್ದ ನೆಮ್ಮದಿಯನ್ನು ಕಳೆದುಕೊಂಡು ಜೀವಿಸಬೇಕಾದ ಅನಿವಾರ್ಯದಲ್ಲಿ ತನ್ನತನವನ್ನು ಬಿಟ್ಟುಕೊಡಲಾಗದೇ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳಲಾಗದೆ ಬಾಳು ಸವೆಯುತಿದೆ. ಬದುಕಿನ ಆಸ್ಥಾನದಲ್ಲಿ ರಾಜನಾಗಿ ವಿರಾಜಮಾನವಾಗಿ ಮೆರೆಯಬಹುದಿತ್ತು ಆದರೂ ಅಷ್ಟಾವಕ್ರತನದ ಮೋಹಕ್ಕೆ ಬಲಿಯಾಗಿ ಇದ್ದ ಮೈಯ ವಾಂಛೆಗಳಿಗೆ ರಾಜ್ಯ ಪಟ್ಟವ ತೊರೆದು ವ್ಯಕ್ತಿತ್ವದ ಹರಣದಲ್ಲಿ ಸುಂದರ ಬದುಕನ್ನು ತನ್ನ ಕೈಯಾರ ಹಾಳುಮಾಡಿಕೊಂಡು ನರಕ ಸದೃಶ್ಯ ಸಂಕಷ್ಟಗಳನ್ನು ಎದುರಿಸಿ ಸೋತ ಕಥೆಯಿದು.

      ಸುಂದರ ಬದುಕಿನ ರೂವಾರಿ ಕನಸುಕಂಗಳ ಸಂಸಾರಿ ಹೆಂಡತಿ ಮಕ್ಕಳ ಜೊತೆಜೊತೆಗೆ ಸುಖದಿ ಬಾಳುವಾಗ ಅದಾವ ವಕ್ರದೃಷ್ಟಿಯು ಬಿತ್ತೋ ಅಲ್ಲಿಂದಲೇ ಬದುಕಿನ ಅವನತಿ ಶುರುವಾದ ಅನುಭವ. ಬದುಕನ್ನು ದಿಗ್ಧದರ್ಶಿಸುವವನ ಬದುಕೇ ಹಳ್ಳದಲ್ಲಿ ಬಿದ್ದು ಒದ್ದಾಡುವಂತಹ ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ವಿಪರ್ಯಾಸ.

      ಸೌಂದರ್ಯದ ದೃಷ್ಟಿಯಿಂದ ಅವಿನಾಶ್ ಹೇಳಿಕೊಳ್ಳುವಂತಹ ಸ್ಪುರದ್ರೂಪಿ ಯುವಕನೇನಲ್ಲ. ಆದರೆ ಅವನ ಬರಹಗಳಲ್ಲಿ ಪ್ರೀತಿಯ ಭಾವ , ಪ್ರಕೃತಿಯ ಸೌಂದರ್ಯೋಪಾಸನೆ, ಜೀವನಾನುಭವ ಹೇರಳವಾಗಿರುತ್ತಿತ್ತು. ಪದಗಳಿಗೆ ಪದ್ಯದ ರೂಪ ಕೊಟ್ಟು ಕನಸುಗಳಿಗೆ ಕವನಗಳಲ್ಲಿ ಜಾಗವಿತ್ತು ತನ್ನ ಪಾಡಿಗೆ ತಾನು ಭಾವವಿಹಾರಿಯಾಗಿ ಜೀವನಾನಂದದಲ್ಲಿ ಮಿಂದು ಹೋಗಿದ್ದ. ಅಲ್ಲಿ ಇಲ್ಲಿ ನಡೆಯುತ್ತಿದ್ದ ಕಾವ್ಯ ಗೋಷ್ಠಿಗಳಲ್ಲಿ ಭಾಗವಹಿಸುತ್ತಾ ತನ್ನ ವೃತ್ತಿ ಪ್ರವೃತ್ತಿಗಳನ್ನು ಸರಿದೂಗಿಸಿಕೊಂಡು ಸಂಸಾರದೊಳಗೆ ಬಡವನಾದರೆ ಕೈ ತುತ್ತು ತಿನ್ನಿಸುವಷ್ಟು ಪ್ರೀತಿಯ ಪುಟ್ಟ ಗೂಡಿನಲ್ಲಿ ಬಾಳು ಸಾಗುತ್ತಿತ್ತು.

   ಬೆಚ್ಚನೆಯ ಗೂಡಿತ್ತು ವೆಚ್ಚಕ್ಕೆ ಬೇಕಾಗುವಷ್ಟು ಹೊನ್ನಿತ್ತು ಇಚ್ಛೆಯನ್ನು ಅರಿಯುವ ಸತಿಸುತೆಯರ ಪ್ರೀತಿ ಇತ್ತು. ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಲು ಭಾವಾಭಿವ್ಯಕ್ತಿಯ ನಂಟಿತ್ತು. ಇಂಥ ಸುಖಸಂಸಾರದ ನೇತೃತ್ವ ವಹಿಸಿದ ಅವನಿಗೆ ಅಭಿಮಾನಿಗಳ ಬೆಂಬಲಿಗರ ಸಣ್ಣದೊಂದು ಹಿನ್ನೆಲೆಯಿತ್ತು. ಯಾರೊಂದಿಗೂ ಸಂಘರ್ಷಕ್ಕಿಳಿಯದ ಯಾವುದಕ್ಕೂ ವಿವೇಚನೆ ಕಳೆದುಕೊಳ್ಳದ ತನ್ನ ಜೊತೆಗಾರರೊಂದಿಗೆ ಸ್ನೇಹಜೀವಿಯಾಗಿ ಬದುಕಿದ ಭಾವಜೀವಿಯಾಗಿದ್ದ ಅವಿನಾಶ್. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವನ ಬರಹಗಳನ್ನು ಮೆಚ್ಚುವ ಸ್ನೇಹಿತರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಅದರಲ್ಲಿ ಅವನ ವಿದ್ಯಾರ್ಥಿಗಳು, ಸಹ ಯಾನಿಗಳು, ಹಿರಿಯರು ಕಿರಿಯರೆನ್ನದೆ ಎಲ್ಲರೊಂದಿಗೂ ಒಳ್ಳೆಯ ಒಡನಾಟ ಹೊಂದಿದ್ದ. ಇಂತಹ ಸ್ವಚ್ಛ ವ್ಯಕ್ತಿತ್ವದ ಅವಿನಾಶನ ಭಾವ ಪಯಣದಲ್ಲಿ ಅವಳ ಸ್ನೇಹದ ಪ್ರವೇಶವಾಯಿತು. ಎಲ್ಲರ ಹಾಗೆ ಅವಳಿಂದಲೇ ಲೈಕು ಕಾಮೆಂಟು ಬರತೊಡಗಿದವು. ಅವು ಕೇವಲ ಅವನ ಬರಹಗಳಿಗೆ ಸೀಮಿತವಾಗಿರಬೇಕಾಗಿತ್ತು. ಆದರೆ ಬರು ಬರುತ್ತಾ ಸ್ನೇಹವೆಂಬುದು ಆತ್ಮೀಯತೆಯಾಗಿ ವೈಯಕ್ತಿಕ ಬದುಕಿನ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಾರೆ. ಅವಳಿಗೂ ಬರಹದ ನಂಟು ಇದ್ದುದರಿಂದ ಆ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿದ್ದವು. ಅವಳು ಅವನ ಬರಹದ ಹುಚ್ಚು ಅಭಿಮಾನಿಯಾಗಿದ್ದಳು. ಸ್ವಚ್ಛ ಸ್ನೇಹದ ಪ್ರತಿಪಾದನೆಯಲ್ಲಿ ಅವನು ಮುಂದೊದಗಬಹುದಾದ ಅಪಾಯವನ್ನು ಮನಗಂಡರು ಅದಕ್ಕೆ ಯಾವುದೇ ಕುಂದು ಬರದಂತೆ ನಡೆದುಕೊಳ್ಳುವ ಆತ್ಮವಿಶ್ವಾಸ ಅವನಲ್ಲಿ ಇತ್ತಾದರೂ ಅವನು ಅವಳಿಂದ ಅದನ್ನು ನಿರೀಕ್ಷಿಸಿರಲಿಲ್ಲ.

0530ಎಎಂ11022022
*ಅಮುಭಾವಜೀವಿ ಮುಸ್ಟೂರು*

ಮುಂದುವರಿಯುವುದು

ಒಲವಿನ ಪೂಜೆಗೆ ದಿನವೇಕೆ
ಕ್ಷಣ ಒಂದಾದರೂ ಸಾಕು ಪ್ರೀತಿಸೋಕೆ

ಪ್ರೀತಿಯ ಪ್ರತಿಪಾದನೆಯೇ ಬದುಕು
ಪ್ರೀತಿಸುವ ಹೃದಯದ ಇರದು ಕೆಡುಕು 
ಇಡುವ ಹೆಜ್ಜೆಯ ಅಡಿ ಮೆತ್ತೆ ಈ ಪ್ರೀತಿ
ಜಗವ ಸಲಹುವ ಸಮಭಾವ ಅದರ ನೀತಿ

ಹೆಣ್ಣು-ಗಂಡುಗಳ ಎದೆ ಭಾವದ ಕವಿತೆ
ಕತ್ತಲು ಹೊಳೆಯುವುದು ಕಣ್ಣ ಹಣತೆ
ಮೇಲು ಕೀಳುಗಳ ಛಾಯೆ ಇರದ
ಮೇರು ವ್ಯಕ್ತಿತ್ವ ಅದರದು

ಕುರೂಪವನೂ ಅಂದಗಾಣಿಸುವ
ಅಪರೂಪದ ಅನುಬಂಧ ಪ್ರೀತಿ
ಬಡತನದಲ್ಲೂ ಸಿರಿತನ ಕಾಣುವ
ಶ್ರೀಮಂತ ಭಾವಗೀತೆ ಈ ಪ್ರೀತಿ

ದೂರುವವರನ್ನು ಆರಾಧಿಸುವ
ದ್ವೇಷ ದಳ್ಳುರಿಯನ್ನು ಆರಿಸುವ
ಸೋತ ಬದುಕಿಗೆ ಸಂಜೀವಿನಿಯಾಗಿ
ಸಮೃದ್ಧಿಯ ನೆಮ್ಮದಿ ತರುವುದು ಪ್ರೀತಿ

ಪಡೆದುಕೊಳ್ಳುವುದಕ್ಕಿಂತ ಕೊಡುವ ತೃಪ್ತಿ
ನೀಡುವುದು ಈ ಒಲವಿನ ಸಂದೀಪ್ತಿ
ಕಳೆದು ಹೋಗುವುದರಲ್ಲೂ ಗೆಲುವು ತರುವ
ಅಭಿಮಾನದ ಅಶರೀರವೀ ಪ್ರೀತಿ

ಅನುಭವಿಸೋಣ ಸದಾ ಅದನ್ನು
ಅವಮಾನಿಸಿದಂತೆ ಕಾಯೋಣ ಇನ್ನು
ಬದುಕಿನ ಘನತೆಯೇ ಪ್ರೀತಿ
ಅದರ ಅಂತಃಸತ್ವವೇ ಈ ಧರಿತ್ರಿ

0659ಎಎಂ11022022
ಅಮುಭಾವಜೀವಿ ಮುಸ್ಟೂರು 

ದೂರಲಾರೆ ಮನವೇ
ನನಗೇಕೆ ದೂರಾದವರು ಗೊಡವೆ

ಸಂಬಂಧಗಳ ಬೆಸೆದುಕೊಳ್ಳಲು
ರಕ್ತದ ನಂಟೇ ಆಗಬೇಕಿಲ್ಲ
ಭಾವ ಬಂಧದಿ ನೋವು ಹಂಚಿಕೊಳ್ಳಲು
ಸ್ನೇಹದ ನೆರಳು ಒಂದೇ ಸಾಕಲ್ಲ

ಕರುಳ ಬಂಧ ಇರುವವರೆಲ್ಲ
ಹಗಲಿದ್ದು ಇರುಳು ಬಿಟ್ಟು ಹೋಗುವರಲ್ಲ
ನಲಿವಿಗಿಂತ ನೋವಿನಲ್ಲಿ ಹೆಗಲಾಗುವ
ನಿರೀಕ್ಷೆಗಳೇ ಇರದ ಸ್ನೇಹ ಸಹಾಯಕ್ಕೆ ಸಮವಿಲ್ಲ

ಹೆಜ್ಜೆಹೆಜ್ಜೆಗೂ ತಪ್ಪೇ ಹುಡುಕುವ ಬದಲು
ತಪ್ಪಾಗದಂತೆ ಕಾಯುವ ರಕ್ಷೆಯೇ ಮಿಗಿಲು
ಸೋತವರ ಮೇಲೆ ಸವಾರಿ ಮಾಡುವುದಕ್ಕಿಂತ
ಸೋತಾಗ ಸಾಂತ್ವಾನಿಸೋ ಸಾಂಗತ್ಯ ಶ್ರೇಷ್ಠಶುಭ

ಎದುರಲ್ಲಿ ನಕ್ಕು ಮರೆಯಲ್ಲಿ ಹಲ್ಲು ಮಸೆಯುವ
ಎಷ್ಟು ಸಂಬಂಧಗಳು ಇದ್ದರೇನು ಫಲ
ಎದೆಗುಂದದಂತೆ ಎದುರೀಜುವ ಮನಕೆ
ಉತ್ಸಾಹ ತುಂಬುವ ಗೆಳೆತನಕ್ಕೆ ಯಾವುದು ಸಾಟಿ

ಬೆಳೆಯುವವನ ಭಾವನೆಗಳ ಅರಿಯದೆ
ಚಿವುಟುವ ಆ ಕ್ರೂರ ಉಗುರುಗಳಿಗಿಂತ
ಬೆಳೆಯುವ ಸಿರಿಯ ಮೊಳಕೆಯಲ್ಲಿ ಗುರುತಿಸಿ
ಸಾಧಿಸೋನಿಗೆ ಅಭಯಾಸ್ತ ನೀಡುವ ಕೈ ಶ್ರೇಷ್ಠ

ಜೀವ ಜೀವನಗಳಿರುವ ತನಕ
ಮರೆಯದಂತೆ ಕಾಪಿಟ್ಟುಕೋ ಮನವೇ
ಸ್ನೇಹವೊಂದೆ ಉತ್ತಮೋತ್ತಮ ಬಂಧ
ಎಲ್ಲ ಸಂಪತ್ತು ಅದರ ಮುಂದೆ ಶೂನ್ಯವೇ

0228ಎಎಂ12022022
*ಅಮುಭಾವಜೀವಿ ಮುಸ್ಟೂರು*

    ಒಂದು ದಿನದ ಆಚರಣೆಯಲ್ಲ
ಈ ನಮ್ಮ ಪ್ರೇಮವು
ಪ್ರತಿಕ್ಷಣದ ಅನುಸರಣೆಯು
ಅಂತರಂಗದ ಈ ಅನುಭಾವವು

ತುಸು ಜಗಳ ಇರುವಲ್ಲಿ
ಒಲವಿನ ಅಡಿಪಾಯ ಭದ್ರವು
ಹಸುಗೂಸಿನಂತ ಮನಸ್ಸು ನಿನ್ನದು
ನಸು ನಗುತ ಬಾಳೋಣ ಅದೇ ಸೂತ್ರವು

ಹೃದಯ ಹೃದಯಗಳು ಬೆಸೆದ ಗೂಡಿದು
ಭಾವದ ಅನುಬಂಧ ಹೊಸೆದ ಬಂಧವಿದು
ಉಸಿರಿರುವ ತನಕ  ಉಸಿರಾಗಿರುವ
ಹಸಿರಿನ ಸಮೃದ್ಧ ನಮ್ಮನ್ನು ಈ ಕೂಟವು

ನನ್ನ ಹಾದಿಗೆ ನೆರಳಾದೆ ನೀನು
ನಿನ್ನ ಭಾವಕೆ ಕೊರಳಾಗೂವೆ ನಾನು
ನೀನಿರುವ ತಾಣವೇ ಪ್ರೇಮಕಾಶ್ಮೀರ
ನಾನಾಗಿ ಬಾಳುವೆ ನಿನ್ನ ಹಣೆಯ ಸಿಂಧೂರ

ಅಮರತ್ವದ ಪ್ರೇಮದ ಕೂಸು ನಾವು
ಬಾಳ ಸೊಗಸ ಸವಿಯೋಣ ನಾವು
ಸುಖ-ದುಃಖವ ಸಮ ಭಾವದಿ ಸಹಿಸಿ
ಸದಾ ಖುಷಿಯಾಗಿರುವ ಪ್ರೀತಿಸಿ

074ಎಎಂ14022022
*ಅಮುಭಾವಜೀವಿ ಮುಸ್ಟೂರು*
    
ನೀ ಹಚ್ಚಿದ ಒಲವ ಹಣತೆ
ಏಕೋ ನನ್ನ ಸುಡುತ್ತಿದೆ
ಬಯಸದೇ ಬಂದ ನೀನು
ನೋವಿನಾಳಕೆನ್ನ ತಳ್ಳಿದೆ

ನೀನಾಗೇ ಬಳಿ ಬಂದೆ
ಪ್ರೀತಿಯ ಪ್ರಸ್ತಾಪಿಸಿದೆ
ಬೇಡವೆಂದರೂ ಮತ್ತೆ ಮತ್ತೆ ಬಯಸಿದೆ
ಲೋಕ ನನ್ನ ದ್ವೇಷಿಸುವಂತೆ ನೀ ಮಾಡಿದೆ

ಅಂತರಂಗದೊಳಗೆ ಅದ್ಯಾವ ವಿಷ ತುಂಬಿ
ನನ್ನ ವಶಮಾಡಿಕೊಂಡೆ ನೀನು
ಪ್ರಶಾಂತವಾಗಿದ್ದ ನನ್ನ ಬಾಳಿನೊಳಗೆ
ಅಶಾಂತಿಯ ತುಂಬಿ ಹೋದೆ ನೀನು

ಪದೇ ಪದೇ ನಾ ಹೇಳುತ್ತಿದ್ದ ಮಾತು ನಿಜವಾಯ್ತು
ಹೂವಿಂದ ಹೂವಿಗೆ ಹಾರುವ ದುಂಬಿ ನೀನೆಂದು
ಮಧುವ ಇರುವ ಭರದಲ್ಲಿ ನೀನು
ಬದುಕನ್ನೇ ಬರ್ಬರವಾಗಿ ಕೊಂದು ಹೋದೆ

ನಿನ್ನ ಈ ಮೋಸದಾಟಕ್ಕೆ
ನಾ ಬಲಿಯಾದದ್ದು ವಿಪರ್ಯಾಸ
ನಿನ್ನ ನಾಟಕದ ಮಾತುಗಳಿಗೆಲ್ಲ
ಕಿವಿಗೊಟ್ಟು ನಾ ಕಳೆದುಕೊಂಡೆ ಸಂತಸ

ಸದ್ಯ ನಿನ್ನ ಸುಳಿಗೆ ಸಿಕ್ಕು
ನಾ ಸರ್ವನಾಶವಾಗಲಿಲ್ಲ
ನಿನ್ನ ದುರ್ನಡತೆಗಳಿಗೆ ಶಿಕ್ಷೆಯಾಗಲಿ
ನೊಂದ ನನ್ನ ಹೃದಯಕ್ಕೆ ಶಾಂತಿ ಸಿಗಲಿ

1115ಪಿಎಂ15022022
 *ಅಮುಭಾವಜೀವಿ ಮುಸ್ಟೂರು*
    
ಕಳೆದುಹೋದಳು ನಲ್ಲೆ
ಬಾಡಿದಂತೆ ಮೊಗ್ಗು ಮಲ್ಲೆ
ಏಕೆಂದು ಅರಿಯುವ ಮೊದಲೇ
ಮರೆಯಾದಳು ತಂದು ವಿರಹ ಜ್ವಾಲೆ

ಅದು ಏಕೆ ಹೀಗಾಗಿ ಕಳೆದುಹೋದಳು ನಲ್ಲೆ
ಬಾಡಿದಂತೆ ಮೊಗ್ಗು ಮಲ್ಲೆ
ಏಕೆಂದು ಅರಿಯುವ ಮೊದಲೇ
ಮರೆಯಾದಳು ತಂದು ವಿರಹ ಜ್ವಾಲೆ

ಮೊದಲೆಲ್ಲ ಹೀಗಿರಲಿಲ್ಲ ಅವಳು
ಅದು ಏಕೆ ಹೀಗಾಗಿ ಹೋದಳು
ಪ್ರೀತಿಯ ಅಗಾಧ ದೇವತೆ
ಎಲ್ಲಿ ಕಳೆದುಹೋದಳು ಅದೇ ಚಿಂತೆ

ಒಲವ ಒಡನಾಡಿಯಾಗಿ ಬಂದು
ಒಡಲ ಕುಡಿಗಳ ತಂದು
ಒಂದು ಬೇಡಿಕೆ ಇಡದಂತೆ ಬಾಳಿದವಳು
ಇಂದೇಕೆ ಹೀಗೆ ಕಾಣೆಯಾದಳು

ನಂಬಿಕೆಯ ಮಹಾಮೇರು
ವಿಶ್ವಾಸದ ಅಂತಃಸತ್ವ ಬೇರು
ಪ್ರೀತಿಯ ಸೊಗಸಾದ ಸೂರು
ಸತಿ ಇವಳು ನನ್ನ ಬಾಳುಸಿರು

ಕಳೆದುಹೋಗದಿರು ಬಾಳ ಗೆಳತಿ
ನೀನಿರದೆ ನನಗಿರದು ಸದ್ಗತಿ
ಎಡವಿದವನ ಮೇಲೆ ಎದುರಿಸುವಸ್ತ್ರ ಬೇಡ
ನೀನಿರದ ಬದುಕು ನನಗೂ ಬೇಡ

ನಿನ್ನ ಮುಂದೆ ನನಗಿಲ್ಲ ಯಾವ ಘನತೆ
ನೀನಿರದೆ ಬೆಳಗದು ನನ್ನ ಬಾಳ ಹಣತೆ
ಈ ಪಾಪಿಯ ಮನ್ನಿಸಿ ತೋರು ಮಮತೆ
ನೀನೇ ನನ್ನ ಒಲವ ಬತ್ತದ ಒರತೆ

0758ಎಎಂ16022022
 *ಅಮುಭಾವಜೀವಿ ಮುಸ್ಟೂರು*

ಸಾಧನೆಯ ಗಿರಿಯ ತಲುಪಿದವರು
ಹೇಗೆ ಒಬ್ಬೊಬ್ಬರಾಗಿಯೇ ನಮ್ಮನಗಲುತಿಹರು
ಏನವಸರವೋ ಅವರಿಗೆಲ್ಲ
ನಾಡು ಬರಡಾಗುತ್ತಿದೆ ಅವರಿಲ್ಲದೆ

ಅವರವರದೇ ಕ್ಷೇತ್ರದಲ್ಲಿ
ಹೆಜ್ಜೆಗುರುತುಗಳ ಮೂಡಿಸಿದವರು
ಅಷ್ಟೇ ಸಜ್ಜನಿಕೆಯಲ್ಲಿ
ಅವರೆಲ್ಲ ಹೊರಟುಹೋಗುತಿಹರು

ಕಲೆ ಸಾಹಿತ್ಯ ಸಂಗೀತ ಹೀಗೆ
ಎಲ್ಲೆಡೆ ಖಾಲಿ ಖಾಲಿ ಎನಿಸುತ್ತಿದೆ
ಅಭಿಮಾನದ ಎದೆಯೊಳಗೆ
ಅತಿ ದುಃಖವ ಬಿಟ್ಟು ಹೊರಟರು

ಅವರು ನಡೆದ ಹಾದಿಯೇ
ನಮ್ಮ ಮುನ್ನಡೆಗೆ ದಾರಿದೀಪ
ಅವರು ಬಿಟ್ಟು ಹೋದ ಆಸ್ತಿಗಳೇ
ನಮ್ಮೆದೆಯಲಿ ಅಭಿಮಾನದ ಹೆಸರು

ಈಗ ಹೋಗಿ ಮತ್ತೊಂದು ರೂಪದಲ್ಲಿ
ಮತ್ತೆ ಹುಟ್ಟಿ ಬನ್ನಿರಿ ನಮ್ಮ ನಾಡಿಗೆ
ಅಲ್ಲಿವರೆಗೂ ನಿಮ್ಮ ನೆನಪಲ್ಲಿ
ಬಾಳುವೆವು ನಾವು ನಮ್ಮ  ಪಾಡಿಗೆ

0147ಪಿಎಂ16022022
*ಅಮುಭಾವಜೀವಿ ಮುಸ್ಟೂರು *
ಈ ಬೆಳದಿಂಗಳ ಚುಕ್ಕಿಗಳ ಜೊತೆ
ನಮ್ಮಿ ಬಾಳೊಂದು ಸುಂದರ ಕವಿತೆ
ನೀನು ಚುಕ್ಕಿ ನಾನು ಚಂದ್ರಮ
ನಮ್ಮಿಬ್ಬರ ಮಿಲನ ಅನುಪಮಾ

ತಂಗಾಳಿ ತೀಡುವಂತೆ ನಿನ್ನೀ ಮುಂಗುರುಳು
ಸುಮದೊಂದಿಗೆ ಬೆರೆತ ಕಂಪಂತೆ ನಾವುಗಳು
ನೀರವ ರಾತ್ರಿಯ ಅಸ್ಪಷ್ಟ ಕನಸುಗಳು
ನನಸಾಗಿಸಿದರು ನಿನ್ನೀ ಅದೃಷ್ಟದ ಕಂಗಳು

ಸಾಗರ ಉಕ್ಕಿ ಬರುವಂತೆ ಆಸೆ
ಈಡೇರಿತು ನನ್ನೀ ಮನದ ಅಭಿಲಾಷೆ
ಉಷೆ ಮೂಡುವ ತನಕ ನಮ್ಮದೇ ಲೋಕ
ನಾವಿಬ್ಬರೂ ಒಂದಾದಾಗಲೇ ಬಾಳಾಯ್ತು ನಾಕ

ಸಮ ಏನಿದೆ ನಮ್ಮೀ ಒಲವಿಗೆ
ಸಮಯದ ಪರಿವಿಲ್ಲ ನೀನಿರಲು ಜೊತೆಗೆ
ಹಸಿವು ನಿದಿರೆಗು ಈಗ ಜಾಗವಿಲ್ಲ
ಹರೆಯಕೆ ಸಾಟಿ ಜಗದಿ ಬೇರೆ ಏನು ಇಲ್ಲ

ಇರುಳಿದು ಬರಿ ಇರುಳಲ್ಲ
ಮರುಳಾದ ಜೀವಗಳ ಮಡಿಲು
ಸಂಗಾತಿ ನೀನಿರುವ ಈ ವೇಳೆ
ನಮಗೇಕೆ ಬೇಕು ಇನ್ನೊಂದು ನಾಳೆ

1055ಪಿಎಂ16022022
*ಅಮುಭಾವಜೀವಿ ಮುಸ್ಟೂರು*
ಬೆಳದಿಂಗಳು ಚೆಲ್ಲಿದ ಈ ಇರುಳು
ಬೆಳಗುವಂತೆ ನನ್ನ ಹೊಂಗನಸುಗಳು
ಅದಕ್ಕೆಲ್ಲ ಸ್ಪೂರ್ತಿ ನಿನ್ನೀ ಹೊಳೆವ ಕಂಗಳು
ನೀನಿರದೆ ಬರಿದು ನನ್ನ ಈ ಬಾಳು

ಅಂತರಂಗದ ಭಾವನೆಗಳಿಗೆಲ್ಲ
ಜೀವತುಂಬಿದ ಅಕ್ಷರವಾದವಳು
ನೋವಿಗೆ ಮಿಡಿದು ನಲಿವನ್ನು ತಂದ
ಸಂಗಾತಿ ನೀ ನನ್ನ ಬಾಳಿಗೆ ಬೆಳಕಾದವಳು

ಎದೆ ಚಿಪ್ಪಲಿ ಹದವಾಗಿದ್ದ
ಪ್ರೀತಿಯ ಮುತ್ತಿನ ಹಾರವ ಪೋಣಿಸಿ
ಕೊರಳಲ್ಲಿ ಧರಿಸಿ ಹಗಲಿರುಳು ಕಾಯ್ವಳು
ಆಪ್ತರಕ್ಷಕಿ ಅಭಿಸಾರಿಕೆ ಇವಳು

ಪ್ರಕೃತಿ ಗುಣದ ಬಲು ಸಂಪನ್ನೆ
ಮನದಿಚ್ಛೆ ಅರಿಯುವ ಮನದನ್ನೆ
ಬಾಳಿನ ರಥಕೆ ಸಾರಥಿ ಇವಳು
ಒಲವಿನ ಮೊಗದಲ್ಲಿ ಹೊಳೆವ ಕಂಗಳು

ಷರತ್ತುಗಳಿಲ್ಲದೆ ಒಲಿದು ಬಂದವಳು
ಕಷ್ಟ ಸುಖದಲ್ಲೂ ಹೆಜ್ಜೆಗೆ ಹೆಜ್ಜೆ ಇಟ್ಟವಳು
ತಾಯಿಲ್ಲದಿದ್ದರೂ ನನಗೆ ತಾಯೊಲವ ಕೊಟ್ಟವಳು
ತಬ್ಬಲಿ ಭಾವದಿಂದ ಹೊರತಂದ ದೇವತೆಯಿವಳು

ಸೋಲನ್ನು ಗೆಲುವಾಗಿಸಿದ ಸಾಧಕಿ ನನ್ನವಳು
ಸಾವನ್ನು ಗೆಲ್ಲುವ ಆತ್ಮವಿಶ್ವಾಸ ತುಂಬಿದವಳು
ಬಡತನದಲ್ಲೂ ನಗುವ ಕಲೆ ಕಲಿಸಿದವಳು
ಈ ಬಡವನಲ್ಲ ಸಿರಿವಂತನ ಹುಟ್ಟುಹಾಕಿದಳು

ಜೀವ ಜೀವನವೆಲ್ಲ ಮೀಸಲು ಅವಳಿಗೆ
ಬೊಗಸೆ ತುಂಬ ಒಲವ ನೀಡುವೆ ಕೊನೆವರೆಗೆ

1041ಪಿಎಂ17022022
 *ಅಮುಭಾವಜೀವಿ ಮುಸ್ಟೂರು*
ತಾ ದೊಡ್ಡವನೆಂದು ಏಕೆ ಬೀಗುವೆ
ದೊಡ್ಡತನದ ಬಾಳೆ ಬಾಗಿಲ್ಲವೆ
ಗರಿಕೆಯ ಹುಲ್ಲು ನೀನೇಕೆ ಮೆರೆಯುವೆ
ಬೆಳೆದ ಹೆಮ್ಮರ ನೆರಳ ನೀಡುತ್ತಿಲ್ಲವೆ

ನಿನ್ನ ತೃಣ ತನದಿ ಎಲ್ಲಾ ಕಡೆ
ನಾನು ನಾನೆಂದೇಕೆ ಮೆರೆಯುವೆ
ಕ್ಷಣ ಬುವಿಯ ಋಣ ತೀರಲು 
ನೀ ಮಣ್ಣಲ್ಲಿ ಮಣ್ಣಾಗಿ ಹೋಗುವೆ


    ತಂಗಾಳಿ ತೀಡಿದ ಇರುಳು
ಮುಡಿ ಬಿಚ್ಚಿದ ನಿನ್ನ ಹೆರಳು
ಮನಕೆ ಮುದ ನೀಡುತ್ತಿದೆ
ಹಾಡಿತು ಕೋಗಿಲೆಯಾ ಕೊರಳು
ಆ ಇಂಪಿಗೆ ಜಗವೆಲ್ಲ ಮರುಳು
ಅದಕ್ಕೆಲ್ಲ ಕಾರಣವು ನೀನಾದೆ

ಬೆಳದಿಂಗಳು ಚೆಲ್ಲಿದ ರಾತ್ರಿ
ಮನಸ್ಸಿಗೆ ಖುಷಿ ಸಿಕ್ಕ ಖಾತ್ರಿ
ನಿನ್ನೊಲುಮೆಯಿಂದಲೇ ಇದೆಲ್ಲವೂ
ತಾರೆಗಳೂರಿನ ಈ ಹೊಳಪು
ಅದಕ್ಕೆ ಸ್ಪೂರ್ತಿ ನಿನ್ನ ಒನಪು
ಹಿತವಾಗಿದೆ ನಿಸರ್ಗದ  ಈ ಮಡಿಲು

ನಿನ್ನಧರಗಳೇ ನೈದಿಲೆ ಪಕಳೆಗಳು
ಆ ಹುಬ್ಬುಗಳೇ ಮುಸ್ಸಂಜೆಯ ಕಾಮನಬಿಲ್ಲು
ಚಂದಿರನೂರಿನ ಮದುಮಗಳೇ ಇವಳು
ಕವಿ ಭಾವದ ಸ್ಪೂರ್ತಿಯ ಸಾಲು
ಕೆಂಪೇರಿದ ಈ ಕೆನ್ನೆಯ ಮುಗಿಲು
ಋತುಗಳ ಒಡತಿ ನನ್ನವಳು

ಬದುಕಿನ ಪಯಣದ ಸಾರಥಿ
ಬವಣೆಗಳ ನೀಗಿತು ಅವಳ ಪ್ರೀತಿ
ಬಾಳಲಿ ನನಗಿನ್ನೂ ಸದ್ಗತಿ
ಬದುಕಿನ ಸಂಪುಟದ ಮುನ್ನುಡಿ
ಅವಳಿರುವೆ ನನಗೆ ಗಂಧದಗುಡಿ
ಈ ಪಯಣಕ್ಕೆ ಇನ್ನಿಲ್ಲ ಅಂತ್ಯ ಗಡಿ

1029ಪಿಎಂ18022022
*ಅಮುಭಾವಜೀವಿಮುಸ್ಟೂರು*

    ಕರುಣೆ ಇಲ್ಲ ಈ ಸಂಜೆಗೆ
ಜಾರುತಲಿದೆ ತುಸು ಮೆಲ್ಲಗೆ 
ಅದು ಅರಿಯದು ಒಂಟಿತನದ ಬೇಗೆ
ಇನಿಯನಿಲ್ಲದ ರಾತ್ರಿ ಭೀಕರ
ಸಮಯ ಕಳೆಯುವುದು ಬಲು ಘೋರ
ವಿರಹದ ಈ ಬಾದೆ ನಿರಂತರ

ಬೆಳದಿಂಗಳಿನಂತಹವನು
ಬರಲಾರನು ಇನ್ನೂ
ಅವನಿಗೀಗ ಅಮಾವಾಸ್ಯೆ
ಅವನಿಲ್ಲದ ಈ ಸನಿಹ
ಬೇಯುತಲಿದೆ ಹರೆಯ
ಅದನ್ನೇ ಬೆಂಬಲಿಸುತ್ತಿದೆ ಈ ಸಮಯ

ಹಕ್ಕಿ ಮರಳುತ್ತಿವೆ ಗೂಡಿಗೆ
ಗೋಧೂಳಿ ಕೈತಪ್ಪುತ್ತಿದೆ ಹೀಗಲೇ
ಎಲ್ಲಿರುವನೇ ನನ್ನ ನಲ್ಲ
ತಂಗಾಳಿಗೆ ಮುಂಗುರುಳು ಕೆದರಿದೆ
ಬೆಳದಿಂಗಳುರಿಯ ತನು ತಾಳದಾಗಿದೆ
ಸಿಕ್ಕರೆ ಕರೆತನ್ನಿ ಸೇರಿ ತಾರೆಗಳೆಲ್ಲ

ಕಾಯಿಸದಿರು ಗೆಳೆಯ ಹೆಣ್ಣನ್ನು ಹೀಗೆ
ಕೊಳೆತು ಹೋಗುವುದು ಹಣ್ಣು ನಾಳೆಗೆ
ಈಗಲೇ ಬಂದು ಸವಿಯ ಬಾರದೆ
ಸಾಕಾಗಿದೆ ಈ ಒಂಟಿತನ
ಹೃದಯ ಹಂಬಲಿಸಿದೆ ನಿನ್ನ ಗೆಳೆತನ
ಕಾದಿದೆಯ ತಣಿಸು ಬಾರೆಯ

0602ಪಿಎಂ19022022
 *ಅಮುಭಾವಜೀವಿ ಮುಸ್ಟೂರು*

    
ನನ್ನ ನೀತಿ

ಎಲ್ಲಿ ಮೀರಲು ಎಣ್ಣೆ ಬತ್ತಿಗಳಿಲ್ಲ
ಇಲ್ಲೇ ಇರಲು ಅವಧಿ ಮುಗಿಯುತಿಹುದಲ್ಲ
ಹಿರಿಯರ ನೆರಳಡಿಯಲ್ಲಿ
ಕಿರಿಯ ನಾ ಗುಡಿಕಟ್ಟುವೆ

ನುಡಿದಂತೆ ನಡೆಯುವ ಮಾನವ ಕುಲಜರೊಡಗೂಡಿ ತರುವೆ ಗೌರವ
ಸ್ನೇಹ ಪ್ರೀತಿ ನನ್ನ ಉಸಿರು
ಸ್ವಾಭಿಮಾನದ ಅಭಿಮಾನವೇ ನನ್ನ ತವರು

ಸಕಲ ಜೀವಿಗಳ ಜೊತೆ ನನ್ನ ಬಾಂಧವ್ಯ
ಸದ್ಧರ್ಮ ಮೀರದ ನನ್ನ ಕರ್ತವ್ಯ
ನಿಸರ್ಗದೊಡನೆ ಹೊಂದಿಕೊಂಡು
ಬಾಳುವೆ ನೆಮ್ಮದಿಯ ಹುಡುಕಿಕೊಂಡು

ಆಡುವ ಮಾತಲ್ಲಿದೆ ವಿನಯ
ನನ್ನ ಮೇಲೇಕೆ ಸಂಶಯ
ನೊಂದವರ ತವರು ಈ ಹೃದಯ
ಎಲ್ಲರೊಳಗೊಂದಾಗುವುದೆನ್ನ ಆಶಯ

ಹರಸೋ ಕೈಗಳ ನೆರಳು
ಹಾಡಿ ಹೊಗಳುವುದನ್ನ ಕೊರಳು
ನಿಮ್ಮಿಂದ ಪಡೆದುಕೊಂಡ ಪ್ರೀತಿಯ
ಮತ್ತೆ ಹಿಂತಿರುಗಿಸುವುದೆನ್ನ ನೀತಿಯು

೦೫೦೫೨೦೦೩
ಅಮುಭಾವಜೀವಿ
ಬೇಕು ಬೇಕಂತಲೇ ಬಲೆಯ ಬೀಸಿ
ಮೆಳ್ಳಿ ಮಾತಲ್ಲಿ ಬಲಿ ಹಾಕುವರು ಎಚ್ಚರ
ಪ್ರೀತಿಯ ಮೆತ್ತೆಯನ್ನು ಹಾಸಿ
ಕಾಮದ ಕೆಡ್ಡಕ್ಕೆ ಕೆಡುವುವರು ಎಚ್ಚರ

ಒಲಿಸಿಕೊಳ್ಳುವ ತನಕ ಒಂದೊಳ್ಳೆ ಮಾತು
ಒಲಿದೊಮ್ಮೆ ಮನಸು ಕೊಟ್ಟರೆ ಮುಗಿದೇಹೋಯಿತು
ಇಲ್ಲಸಲ್ಲದ ಅಪಪ್ರಚಾರ ಮಾಡಿ
ಜಗದೆದುರು ಬೆತ್ತಲೆ ಮಾಡಿ ಬೆಲೆ ಕಳೆಯುವರು

ಹೂವಿಂದ ಹೂವಿಗೆ ಹಾರುವ ಚಿಟ್ಟೆಗಳು
ಮನಸ್ಸನ್ನು ಕೆಡಿಸಿ ಹೃದಯ ಘಾಸಿಗೊಳಿಸಿ
ಏನೂ ಆಗಿಲ್ಲವೆಂಬಂತೆ ನಡೆವರು ಜಗದೆದುರು
ಬೆಣ್ಣೆಯೊಳು ಹೊಕ್ಕ ಕೇಶದಂತೆ ಯಾರಿಗೂ ಸಿಕ್ಕರು

ಹೆಣ್ಣೆಂದು ಅನುಕಂಪ ತೋರಿಸಿದರೆ
ಹಳ್ಳಕ್ಕೆ ಬೀಳಿಸಿ ತಾ ಮಾತ್ರ ಬದುಕುಳಿಯುವರು
ಗಂಡೆಂದು ಸ್ನೇಹ ಬೆಳೆಸಿದರೆ
ಕಬ್ಬಿನಂತೆ ಹಿಂಡಿ ಬೀದಿಗೆಸೆವರು

ಲೋಕದೆದುರು ಮಹಾಪತಿವ್ರತೆಯಂತೆ
ತನ್ನ ವಲ್ಲಭನೊಂದಿಗೆ ಗುರುತಿಸಿಕೊಳ್ಳುವವರು
ಅಂತರಂಗದ ಅಂತರ್ಜಾಲದಲ್ಲಿ
ಗೆಳೆತನದ ಸೋಗಲ್ಲಿ ಪ್ರಣಯ ಬಯಸುವರು

ನಿನ್ನ ಹಿಡಿತ ನಿನ್ನ ಕೈಯಲ್ಲಿರಲಿ ಗೆಳೆಯ
ಮನಸೋಲುವ ಮುಂಚೆ ಅರಿತುಕೋ ವಿಷಯ
ಬಿದ್ದು ಏಳಲಾಗದಂತೆ ನೆಲಕಚ್ಚಬೇಡ
ಮರಳು ಮಾತಿಗೆಂದು ನೀ ಸೋಲಬೇಡ

1048ಪಿಎಂ03022022
*ಅಮುಭಾವಜೀವಿ ಮುಸ್ಟೂರು*
    

ಹಸಿರು ಪೈರಿನ ನಡುವಲ್ಲಿ
ನಗುತಾ ನಿಂತಿರಲು ನೀನಲ್ಲಿ
ನನಗರಿವಿಲ್ಲದೆ ನಾ ಕಳೆದು ಹೋದೆ
ನಿನ್ನೊಲವಿನ ಜಾಡಲ್ಲಿ
ನಾ ಸೇರಿದೆ ಗೂಡಲ್ಲಿ
ನಿನ್ನ ಈ ಪ್ರೀತಿಗೆ ನಾ ಶರಣಾದೆ

ಕಾನನದ ಸುಮವೊಂದು
ಕೈ ಬೀಸಿ ಕರೆಯುವಾಗ
ವಶವಾಗದ ಹೃದಯವುಂಟೇನು
ಗಗನದ ಅಂಚಿಂದ
ಬಾಗಿದ ಮಳೆಬಿಲ್ಲು ಚಂದ
ನಿನ್ನ ಈ ಚೆಲುವಿನ ಗುಟ್ಟೇನು

ಅಧರದ ಮಧು ಹೀರಲು
ದುಂಬಿ ದಂಡ ಕಾದಿರಲು

ಯಾರದೀ ಕೈವಾಡವೂ
ಯಾರದೀ ಪವಾಡವು

ಹೆಜ್ಜೆಹೆಜ್ಜೆಗೂ ಅಡೆತಡೆಗಳನ್ನೊಡ್ಡಿ
ಹೃದಯ ಹೃದಯಗಳ ಬಂಧ ಕಡಿದು
ಸಂಬಂಧಗಳ ನಡುವಿನ ಸೇತುವೆ ಮುರಿದು
ಸೋಲುಗಳ ಸರಮಾಲೆಯ ಹೆಣೆದವರಾರು

ಪ್ರೀತಿ ತುಂಬಿದ ಬಾಳ ಪಾತ್ರೆಯಲ್ಲಿ
ದ್ವೇಷದ ಉಳಿಯ ಹಿಂಡಿ ಮೆರೆವರಿಲ್ಲಿ
ಚಿಕ್ಕದೊಂದು ಅಸಮಾಧಾನದ ಕಿಡಿಗೆ 
ತುಪ್ಪ ಸುರಿದು ಜ್ವಲಿಸುವಾಗ ತಮ್ಮ
ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುವರು

ಅಂತರಂಗದ ಪರಿಶುದ್ಧತೆಗೆ ತಾವು
ಅವಹೇಳನದ ಮಸಿ ಬಳಿದರು
ಅಳುವ ಮನಸ್ಸನ್ನು ಕಂಡು ಮತ್ತೆ
ಚುಚ್ಚು ನುಡಿಗಳ ಮುಲಾಮು ಮೆತ್ತುವರು
ನೆಮ್ಮದಿಯ ಬದುಕಿಗೆ ಕೊಳ್ಳಿಯಿಟ್ಟರು

ಕಪಟವಿಲ್ಲದ ಮನಸ್ಸಿನೊಳಗೆ
ಕುಬುದ್ಧಿ ಬಳಸಿ ಕೆಟ್ಟತನ ತುಂಬಿದರು
ಕಟ್ಟುಪಾಡುಗಳನ್ನು ಗಾಳಿಗೆ ತೂರಿ
ಮುಗ್ಧ ಮನಸ್ಸಿಗೆ ಬರಿ ನೋವನ್ನೇ ಕೊಟ್ಟರು
ಏಕೆ ಅವರೆಲ್ಲ ಹೀಗಾದರು

ಕರ್ತವ್ಯಕ್ಕೆ ಮಾತ್ರ  ಕೈಯನ್ನು ಕೊಟ್ಟು
ಆದಾಯಕ್ಕೆ  ಹಾತೊರೆಯುವರು
ಪ್ರಾಮಾಣಿಕತೆಗೆ ಪ್ರಾಣ ಕಂಟಕ ತಂದು
ಹೊಣೆಗಾರಿಕೆಯಲ್ಲಿ ನುಣುಚಿ ಕೊಳ್ಳುವರು
ಜಗದಿ ಎಲ್ಲವನು ಪಡೆದುಕೊಂಡರು

ನೊಂದ ಜೀವದ ಚೇತನ್ ಅನಂದಿಸಿ
ಆ ಕತ್ತಲಲ್ಲಿ ಆನಂದಿಸುವರು ಮುಖವಾಡ ಧರಿಸಿ
ಯಾರು ಏನೇ ಮಾಡಿದರೂ ಇಲ್ಲಿ
ನಡೆ ಮನವೆ ನಿನ್ನತನವನನುಸರಿಸಿ

0704ಎಎಂ07022022
*ಅಮುಭಾವಜೀವಿ ಮುಸ್ಟೂರು*
    

Comments

Popular posts from this blog

ಲೇಖನ