ಕವನ
*ಅದಕೇಕೆ ಚಿಂತಿಸುವೆ*
ನಮಗೇಕೆ ಹೇಳು ಈ ಬಿರುದು ಸನ್ಮಾನ
ನನಗಾಗಿ ನೀನು ನಿನಗಾಗಿ ನಾನು
ಇರಲು ಯಾವ ಪ್ರಶಸ್ತಿಯೂ
ಇಲ್ಲ ಅದರ ಸಮಾನ
ಅಂಬಿಗನ ಕಾಯಕ ಮಾಡುವ
ನಮಗೇಕೆ ಹೊಗಳಿಕೆಯ ಹಂಗು
ಗುರಿ ಮುಟ್ಟಿಸಿದರಾಯ್ತು
ಕಾಯಕವೇ ದೈವ ಸಮಾನ
ಕೋಗಿಲೆಗೆಲ್ಲಿದೆ ಸನ್ಮಾನ
ಪರಪುಟ್ಟ ಎಂಬ ಅವಮಾನ
ಆದರೂ ಹಾಡುವುದು ಇಂಪಾಗಿ
ಕೇಳುವ ಕಿವಿಗಳಿರಲು ಅದುವ ಸನ್ಮಾನ
ಅರಳುವ ಹೂವು ಎಂದೆಂದೂ
ದೇವರಿಗರ್ಪಿತವಾಗಲೆಂದು ಬಯಸದು
ಮಸಣಕೂ ಕೂಡ ಅದು
ನಗು ನಗುತ ಸಾಗಿ ಮಣ್ಣಾಗುವುದು
ಇರುಳೆಂದಿಗೂ ಕೊರಗುವುದಿಲ್ಲ
ಬಂದೇ ಬರುವುದೊಮ್ಮೆ ಬೆಳಕು
ಅಲ್ಲಿಯವರೆಗೂ ತಾರೆಗಳ ಜೊತೆ
ನಲಿಯುತ ಕಾಲ ತಳ್ಳುವುದು
ಹೆಜ್ಜೆ ಗುರುತಿನ ಸದ್ದು
ಕೇಳದು ಯಾರಿಗೂ ಅದು
ಈಗ ಇದ್ದು ಮತ್ತೆ ಮರೆಯಾಗುವುದು
ಅದಕೇಕೆ ಚಿಂತಿಸುವೆ ನಡೆದುಬಿಡು ಒಂಟಿಯಾಗಿ
0839ಪಿಎಂ24032019
*ಅಮು ಭಾವಜೀವಿ*
ಇಂದು ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾದ ನಮ್ಮೂರಿನ ಬಾಲಕ "ಕಿರಣ್" ಅವನಿಗೆ ಭಾವಶ್ರದ್ದಾಂಜಲಿ
*ಘೋರ ದುರಂತ*
ಓ ಸಾವೇ ನಿನಗೆ ನ್ಯಾಯವೇ
ಈ ಘೋರ ದುರಂತಕ್ಕೆ ಕೊನೆಯಿಲ್ಲವೇ
ಕಿರಣ ಇನ್ನೂ ಬೆಳಗೇ ಇಲ್ಲ
ಮತ್ತೆ ಕತ್ತಲೆ ಕವಿಯಿತೇ
ಕನಸು ಇನ್ನೂ ಕಣ್ಣಲೇ ಇತ್ತು
ಕ್ಷಣದಲ್ಲಿ ಕಮರಿ ಹೋಯಿತೇ
ಸಾವೇ ನೀನೆಷ್ಟು ಘೋರವೇ
ನೋವಿಗೂ ನೋವಾಗುವಷ್ಟು ಕ್ರೂರವೇ
ಯಾವ ರೂಪ ನಿನ್ನದು
ಮೊದಲೆ ಹೇಳಬಾರದೇ
ಬದುಕ ಭರವಸೆಯೇ ಕಳಚಿ ಬಿತ್ತು
ಇರುವ ಒಂದು ಆಸೆಯು ನುಚ್ಚುನೂರಾಯಿತು
ಬೆಚ್ಚಿಬಿದ್ದಿದದೆ ಈಗ ಬದುಕು
ಇನ್ನೆಷ್ಟು ತಾಳಬೇಕು ಕೆಡುಕು
ಕಣ್ಣ ಮುಂದೆಯೇ ಹಾದು ಹೋದೆ
ಸಣ್ಣ ಸುಳಿವು ನೀಡದಾದೆ
ಗೆದ್ದು ನಗುವೆಯಾ ನೀನೀಗ
ಆ ನೋವ ಸಹಿಸುವುದೇಗೆ ಈಗ
ಕರುಣೆಯ ಪಾಠ ಕೇಳಿಲ್ಲವೇ
ಆಕ್ರಂದನದ ಶಾಪ ತಟ್ಟಲಿಲ್ಲವೆ
ಸಾಕು ಮಾಡು ಘೋರ ದುರಂತ
ಸೋತ ಜೀವವಾಗಲಿ ಶಾಂತ
0259ಪಿಎಂ24032018
*ಅಮು ಭಾವಜೀವಿ*
ಹೆಣ್ಣೆಂಬ ಕಾರಣಕೆ*
ನಿನ್ನೊಳಗೆ ನಾನವಿತು ಕೂತು
ಜೀವನವ ನೋಡುವೆನು *ಅಮ್ಮ*
ಎಷ್ಟೊಂದು ಕಷ್ಟವಾಗಿದೆ
ನನ್ನ ಹೊತ್ತ ನಿನ್ನ ಬದುಕು
ಹೆಣ್ಣಿಂಬ ಕಾರಣಕ್ಕೆ ನೀನು
ಎಲ್ಲರಿಗಿಂತ ಮುಂಚೆ ಏಳಬೇಕು
ಮನೆಯ ಎಲ್ಲಾ ಕೆಲಸಗಳ
ನೀನೊಬ್ಬಳೇ ನಿಭಾಯಿಸಬೇಕು
ಅತ್ತೆ ಮಾವರ ಸ್ವತ್ತು ನೀನಾಗಿ
ಅವರಾಣತಿಯಂತೆ ನೀ ನಡೆಯಬೇಕು
ಗಂಡನೆಂಬುವವನ ಅಡಿಯಾಳಾಗಿ
ಆವನ ಕಾಮತೃಷೆ ನೀಗಿ ನನ್ನ ಹೇರಬೇಕು
ಎಲ್ಲರ ಬೇಕು ಬೇಡಗಳ ಕೇಳುವ ನೀನು
ನಿನ್ನ ಬೇಕು ಬೇಡಗಳ ಮರೆತೇಬಿಡುವೆ
ಎಲ್ಲಾ ಹೊಣೆಗಳ ಹೊತ್ತು ಮನೆಗೆ
ನೀ ಗಾಣದೆತ್ತಿನಂತೆ ದುಡಿವೆ
ಬಿಡುವಿಲ್ಲದ ಈ ಕಾಯಕಕೆ
ಸಂಬಳವಿಲ್ಲದ ಕೆಲಸಗಾರಳು ನೀನು
ದೇಹ ದಣಿದರೂ ದುಡಿವೆ ಏಕೆ
ನಿನಗೂ ವಿಶ್ರಾಂತಿ ಬೇಡವೇನು ?
ಹುಟ್ಟಿದ ಮೇಲೆ ಇದನೆಲ್ಲ ನಾನೂ
ನಿತ್ಯ ಮಾಡಲೇಬೇಕೇನು ?
ನಿಸರ್ಗದ ಮನೆಯಲ್ಲಿ ಎಲ್ಲರೂ
ಸರಿ ಸಮಾನರಲ್ಲವೇನು ?
*ಅಮುಭಾವಜೀವಿ*
ತೆರೆಯುತ್ತಿದೆ ಹಗಲು ಕಣ್ಣ
ಬಳಿಯುತ್ತಾ ಲೋಕಕೆ ಬಣ್ಣ
ಹೇಮಂತನ ಸಾಮಂತನಾಗಿ
ಮಂಜು ಮುಸುಕಿದೆ ಇಬ್ಬನಿಯಾಗಿ
ಹಕ್ಕಿಗಳ ಗಾನ ಮಾಧುರ್ಯ
ಬಿರಿದ ಮೊಗ್ಗರಳುವ ಸೌಂದರ್ಯ
ಬಿಚ್ಚಿಟ್ಟಿತು ದಿನದ ಆಂತರ್ಯ
ರವಿ ಶುರುವಿಡಲು ತನ್ನ ಕೈಂಕರ್ಯ
ಹೊಸ ಭರವಸೆಗಳ ಹೊತ್ತು
ಅನಾವರಣಗೊಳ್ಳುತಿದೆ ಪ್ರಕೃತಿ
ಹತ್ತಾರು ನಿರೀಕ್ಷೆಗಳ ಸುತ್ತ
ತಿರುಗುತ್ತಿದೆ ಬಾಳ ಸದ್ಗತಿ
ಇರುಳು ಕಳೆದು ಬೆಳಕು ಹರಿದು
ನವ ಚೈತನ್ಯವ ತಂದಿದೆ ಹುರುಪು
ಮಾನವ ನಾನು ಸೋಮಾರಿಯೆನಿಸಿತು
ನೋಡುತ ನಿಸರ್ಗದ ವೈಯಾರ ಒನಪು
ಸ್ವರ್ಗವ ತಂದಿತು ಬಳಿಗೆ
ಈ ಸುದಿನದ ಸುಂದರ ಘಳಿಗೆ
ಆಸ್ವಾದಿಸಿದರದೇ ಹೋಳಿಗೆ
ಆಪ್ಯಾಯಮಾನವದು ಬಾಳಿಗೆ
*****ಅಮು ಭಾವಜೀವಿ*****
Comments
Post a Comment