ಕವನ

*#ಬಾಳಸಂಗಾತಿ*

ಮಳೆಯೇ ಇಳೆಯ ಸಂಗಾತಿ
ಇರುಳಿಗೆ ಬೆಳ್ದಿಂಗಳೇ ಸಂಗಾತಿ
ಮಂಜಾನೆಗೆ ಮಂಜು ಹನಿಯೇ ಸಂಗಾತಿ
ಹೂವಿಗೆ ದುಂಬಿಯೇ ಸಂಗಾತಿ

ನದಿಗೆ ಸಾಗರವೇ ಸಂಗಾತಿ
ಅಲೆಗೆ ತೀರವೇ ಸಂಗಾತಿ
ಮುಗಿಲಿಗೆ ಮಿಂಚೇ ಸಂಗಾತಿ
ಮುಸ್ಸಂಜೆಗೆ ಹೊಂಬಣ್ಣವೇ ಸಂಗಾತಿ

ಹಸಿರ ಸಂಭ್ರಮಕೆ ತಂಗಾಳಿಯೇ ಸಂಗಾತಿ
ವಸಂತಕೆ ಚೈತ್ರವೇ ಸಂಗಾತಿ
ತಾರೆಗಳಿಗೆ ಚಂದ್ರಮನೇ ಸಂಗಾತಿ
ರವಿಗೆ ಉಷೆಯೇ ಸಂಗಾತಿ

ಸ್ನೇಹಕೆ ಪ್ರೀತಿಯೇ ಸಂಗಾತಿ
ಪ್ರೀತಿಗೆ ಸ್ನೇಹವೇ ಸಂಗಾತಿ
ನೋವಿಗೆ ನಲಿವೇ ಸಂಗಾತಿ
ಬೆಳಕಿಗೆ ನೆರಳೇ ಸಂಗಾತಿ

ಗಂಡಿಗೆ ಹೆಣ್ಣೇ ಬಾಳಸಂಗಾತಿ
ಹೆಣ್ಣಿಗೆ ಗಂಡೇ ಪ್ರೇಮ ಸಂಗಾತಿ
ಹುಟ್ಟಿಗೆ ಸಾವೇ ಸಂಗಾತಿ
ಬದುಕಿಗೆ ಬವಣೆಯೇ ಸಂಗಾತಿ

ಗೆಲುವಿಗೆ ಸೋಲೇ ಸಂಗಾತಿ
ಒಲವಿಗೆ ವಿರಹವೇ ಸಂಗಾತಿ
ಜೀವನಯಾನವೇ ಸಂಪ್ರೀತಿ
ಆದಿಅಂತ್ಯಕೂ ಪ್ರೀತಿಯೇ ಸ್ಪೂರ್ತಿ

1008ಪಿಎಂ15032018

*ಅಮು ಭಾವಜೀವಿ*

ಅಮ್ಮನಂತ ಕರುಣಾಮಯಿ*

ಅಕ್ಕ ಇವಳು ಎರಡನೇ ತಾಯಿ
ಅವಳು ಅಮ್ಮನಂತ ಕರುಣಾಮಯಿ

ನನಗಿಂತಲೂ ಮುಂಚೆಯೇ
ಗರ್ಭದಿ ಜಾಗ ಪಡೆದವಳು
ನಾ ಹುಟ್ಟಿದ ಕ್ಷಣದಿಂದಲೇ
ಅಕ್ಕನ ಪಟ್ಟದಿ ಸಂಭ್ರಮಿಸಿದವಳು
ಕರುಳಬಳ್ಳಿಯ ಬಂಧು ಅವಳು
ಕರುಣೆಯಿಂದಲಿ ನನ್ನ ಸಲಹಿದವಳು

ತನಗಾಗಿ ಸಿಕ್ಕಿದುದನೆಲ್ಲಾ
ನನ್ನೊಂದಿಗೆ ಹಂಚಿಕೊಂಡವಳು
ಆಟಪಾಠಗಳೊಂದಿಗೆ ಜೊತೆಯಾಗಿ
ಸದಾ ನನ್ನ ಬೆಂಗಾವಲಾದವಳು
ಅಮ್ಮನ ಕೆಲಸಕೆ ಸಹಾಯಕಳು
ಅಮ್ಮನಂತೆ ನನ್ನ ಸಲಹಿದವಳು

ಅಕ್ಕರೆಯ ಪಾಲಕಳು
ನಾ ನಕ್ಕರೆ ಖುಷಿ ಪಡುವವಳು
ರಕ್ತಸಂಬಂಧದ ಅನುಬಂಧ ಬೆಸೆದ
ಅಕ್ಕ ಎಂಬ ಅನುರಾಗದ ದೈವ ಇವಳು
ಹೆತ್ತವರ ನಂತರದಿ ನನ್ನ ಪೊರೆದವಳು
ಅಕ್ಕ ನನ್ನ ಬದುಕಿನಾಧಾರವಾದವಳು

142ಪಿಎಂ17032017

*ಅಮುಭಾವಜೀವಿ*

ಭ್ರಷ್ಟರನ್ನು ಸದೆಬಡಿವ
ದಕ್ಷರಿಗಿಲ್ಲಿ ಸಿಗುವುದೊಂದೇ
'ಎತ್ತಂಗಡಿಯ' ಪುರಸ್ಕಾರ
ಅದುವೇ ದುಷ್ಟರ ಸಂಸ್ಕಾರ

ನಾವೇ ಆರಿಸಿದಂತಹವರ
ಅಟ್ಟಹಾಸಕೆ ಕಮರಿವೆ ಜೀವ
ಪ್ರಾಮಾಣಿಕನಾಗಿದ್ದರೆ ಅವನಿಗೆ
ಇವರು ತಂದೊಡ್ಡುವರು ಸಾವ

ಅಧಿಕಾರದ ಮದವೇರಿದಾಗ
ಸಾಮಾನ್ಯನ ಕೂಗು ಕೇಳದಾಗ
ಎಲ್ಲರಿಂದ ಆಯ್ಕೆಯಾಗಿ ಮೆರೆವರು
ಆರಿಸಿದವನ ನೂಕಿ ಹೊರಗೆ

ರಕ್ಷಿಸುವ ಕೈಗಳೆ ಇಂದು
ಕತ್ತನೇ ಹಿಸುಕುತ್ತಿರುವಾಗ
ದಕ್ಷತೆಯೆಂಬುದೇ ದಕ್ಕದೆ ಇಲ್ಲಿ
ಮಣ್ಣಲಿ ಮಣ್ಣಾದರು ಅದೆಷ್ಟೋ ಮಂದಿ ಇಲ್ಲಿ

'ರವಿ'ಯನ್ನೇ ಮರೆಮಾಚೋ
ಮೋಡವೀ ಭ್ರಷ್ಟರು
'ಬಂಡೆ'ಯನ್ನೇ ಹೊಡೆದುರುಳಿಸಿ
ನಿಗೂಢವೆನ್ನುವಾ ದುಷ್ಟರು

ಎಂದಿಗೆ ಇದು ಕೊನೆ
ದಕ್ಷತೆಗೆ ಸಾವೇ ಸಂಭಾವನೆ
ಇನ್ನಾದರೂ ಅಳಿಯಲಿ ದುಷ್ಟಕೂಟ
ಮತ್ತೆ ಹುಟ್ಟಿ ಬರಲಿ ದಕ್ಷತೆಯ ಯುವ ಯುವಸಂಪುಟ ..

ಪ್ರಾಮಾಣಿಕರೆಲ್ಲಾ ಸಮಾಜದ ಶಕ್ತಿಯಾಗಲಿ.

Comments

Popular posts from this blog

ಲೇಖನ